Wednesday, April 11, 2018

ಕೊನೆಯ ಪ್ರವಾದಿ - 6.ಆಸ್ತಿ ಸೇರಿಸಲಿಲ್ಲ! ಐಷಾರಾಮಿಯಾಗಿ ಬಾಳಲೂ ಇಲ್ಲ!

ಇಷ್ಟೊಂದು ಬಹುದೊಡ್ಡ ಅಧಿಕಾರವು,ಪ್ರಭಾವವು ಹೊಂದಿದ್ದ ಪ್ರವಾದಿ ಮೊಹಮ್ಮದ್ (ಸಲ್) ರವರು ಅಧಿಕಾರವನ್ನು, ಪ್ರಭಾವವನ್ನು ಬಳಸಿ ಸಂಪತ್ತನ್ನು ಕೂಡಿಟ್ಟರೇ?

ತಮ್ಮ ಬಾಳನ್ನು ಸಂಪತ್ಭರಿತವಾಗಿಸಿ ಕೊಂಡರೇ?

ಆಸ್ತಿಗಳನ್ನು ಕೊಂಡು ಗುಡ್ಡೆಹಾಕಿದರೇ?

ರುಚಿಯಾದ ತಿಂಡಿಗಳೊಡನೆ, ಅರಮನೆ ವಾಸದೊಡನೆ ಐಷಾರಾಮಿ ಜೀವನ ಬಾಳಿದರೇ?

ಇದನ್ನು ಮೊದಲು ನಾವು ಸಂಶೋಧಿಸೋಣ.

ಏಕೆಂದರೆ ರಾಜಕೀಯದಲ್ಲೋ, ಆಧ್ಯಾತ್ಮದಲ್ಲೋ ನಾಯಕತ್ವವನ್ನು ಪಡೆದವರು ಆ ನಾಯಕತ್ವವನ್ನು ಬಳಸಿ ಹೀಗೆ ತಾನೇ ನಡೆವರು.

ಒಂದು ದೇಶದ ಪ್ರಧಾನಿಯಾಗಿ ಜವಾಬ್ದಾರಿ ಪಡೆದವರು ಕೆಲವು ತಿಂಗಳುಗಳು ಪ್ರಧಾನಿಯಾಗಿ ಪದವಿ ವಹಿಸಿ ನಂತರ ಪದವಿ ಕಳೆದುಕೊಂಡರು ಎಂದಿಟ್ಟು ಕೊಳ್ಳೋಣ. ಅವರು ಆ ಪದವಿಯನ್ನು ಪಡೆಯುವುದಕ್ಕೆ ಮುಂಚೆ ಎಷ್ಟು ಆಸ್ತಿ ಇಟ್ಟು ಕೊಂಡಿದ್ದರೋ, ಅವರ ಕುಟುಂಬದವರಿಗೆ ಎಷ್ಟು ಆಸ್ತಿಗಳು ಇದ್ದವೋ ಅದೇ ಮಟ್ಟಕ್ಕೆ ಈಗಲೂ ಇರುತ್ತದೆಯೇ? ನಿಶ್ಚಯವಾಗಿ ಇಲ್ಲ. ಅವರು ಪದವಿ ವಹಿಸಿದ ಕೆಲ ತಿಂಗಳುಗಳಲ್ಲಿಯೇ ಹಲವು ಪಟ್ಟು ಆಸ್ತಿಗಳನ್ನು ಗುಡ್ಡೆಹಾಕಿರುವರು.

ಈ ರೀತಿ ಆಸ್ತಿಗಳನ್ನು ಗುಡ್ಡೆ ಹಾಕುವುದಕ್ಕೆ ಪ್ರಧಾನಿ ಪದವಿ ಕೂಡ ಬೇಡ. ಪ್ರಧಾನಿಗಿಂತ ಅಧಿಕಾರ ಕಡಿಮೆ ಪಡೆದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಕೂಡ ಐಷಾರಾಮಿ ಜೀವನ ಬಾಳಿ, ತಮ್ಮ ಹೆಸರಲ್ಲೂ, ತಮ್ಮ ಕುಟುಂಬದವರ ಹೆಸರಲ್ಲೂ ಆಸ್ತಿಗಳನ್ನು ಗುಡ್ಡೆ ಹಾಕಿ ಕೊಳ್ಳುವುದನ್ನು ನಾವು ಕಾಣುತ್ತೇವೆ.

ಇದಕ್ಕಿಂತ ಕಡಿಮೆ ಅಧಿಕಾರ ಪಡೆದ ವಿಧಾನ ಸಭಾ ಸದಸ್ಯರುಗಳು, ರಾಜ್ಯದ ರಾಜ್ಯಸಭಾ ಸದಸ್ಯರುಗಳು, ಅಧಿಕಾರಿಗಳು, ಅಂತರಾಡಳಿತ ಮಂಡಳಿಯ ನಾಯಕರುಗಳು,ಅದರ ಸದಸ್ಯರುಗಳು ಕೂಡ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿ ಕೊಳ್ಳುವುದನ್ನು ನಾವು ಕಾಣುತ್ತೇವೆ.

ಇವರುಗಳು ಈ ಪದವಿಗಳನ್ನು ಪಡೆಯುವುದಕ್ಕೆ ಮುಂಚೆ ಯಾವ ಸ್ಥಿತಿಯಲ್ಲಿ ಇದ್ದರೋ, ಅದಕ್ಕಿಂತ ಹಲವು ಸಾವಿರ ಪಟ್ಟು ಶ್ರೀಮಂತರಾಗಿ ಬಿಡುವರು.

ಇದನ್ನು ಒಪ್ಪಿ ಕೊಳ್ಳುವುದಕ್ಕೆ ಇತಿಹಾಸದ ಅರಿವೋ, ಆಧಾರವೋ ಬೇಕಾಗಿಲ್ಲ. ನಮ್ಮ ಕಣ್ಣ ಮುಂದೆಯೇ ಬಾಳುತ್ತಿರುವ ಪ್ರತಿಯೊಂದು ನಾಯಕರು ಇದಕ್ಕೆ ಜೀವಂತ ನಿದರ್ಶನವಾಗಿದ್ದಾರೆ.

ಯಾವ ಒಬ್ಬ ನಾಯಕನ ಮೇಲೆ ಭ್ರಷ್ಟಾಚಾರದ ಆಪಾದನೆ ಹೊರಿಸಲ್ಪಟ್ಟರೂ "ನಾನು ಭ್ರಷ್ಟಾಚಾರ ಮಾಡಲಿಲ್ಲ" ಎಂದವರು ನಿರಾಕರಿಸುವುದಿಲ್ಲ. "ನೀನು ಭ್ರಷ್ಟಾಚಾರ ಮಾಡಲಿಲ್ಲವೇ?" ಎಂದು ಆಪಾದನೆ ಹೊರಿಸಿದವರನ್ನೇ ತಿರುಗಿಸಿ ಕೇಳುವುದೇ ಅವರ ಉತ್ತರವಾಗಿರುತ್ತದೆ.

ಪ್ರಶ್ನೆ ಕೇಳಲು ವಿರೋಧ ಪಕ್ಷಗಳು ಶಿಕ್ಷಿಸಲು ಕಾನೂನು, ನ್ಯಾಯಾಲಯಗಳು, ಹೊರಗೆಡವಲು ಸುದ್ದಿ ಮಾಧ್ಯಮಗಳು
ಇರುವ ಈ ಕಾಲದಲ್ಲಿಯೇ ಹೀಗೆಂದರೆ, ಇಂತಹ ಅಡಚಣೆಗಳು ಇಲ್ಲದ ಕಾಲದಲ್ಲಿ ಅಧಿಕಾರವನ್ನು ಪಡೆದವರು ಎಷ್ಟು ಆಟ ಆಡಿರಬಹುದು?

ಇದಕ್ಕೆ ಇತಿಹಾಸದಲ್ಲಿ ಹೇರಳವಾದ ಕುರುಹುಗಳಿವೆ. ಅವರು ಕಲಿಯಾಟವಾಡಿದ ಅರಮನೆಗಳು, ಕೋಟೆ, ಕೋಟೆಯ ಮೇಲಿನ ಕೈಪಿಡಿಗಳು, ಅಂತಹಪುರಗಳು, ಐಷಾರಾಮಿ ವಸ್ತುಗಳು ಇಂದಿಗೂ ಇದಕ್ಕೆ ಸಾಕ್ಷ್ಯವಾಗಿ ಉಳಿದಿವೆ.

ಕೂರುವ ಆಸನವನ್ನು ಕೂಡ ಬಂಗಾರದಲ್ಲಿ ರೂಪಿಸಿ ಕೊಂಡವರು, ಪ್ರೇಯಸಿಗಾಗಿ ಜನರ ತೆರಿಗೆ ಹಣದಲ್ಲಿ ಪ್ರೇಮ ಭವನ ಸೃಷ್ಟಿಸಿದವರು ಎಲ್ಲರೂ ಚರಿತ್ರೆಯಲ್ಲಿ ಜಾಗ ಪಡೆದಿರುವರು.

ಈ ತರಹದ ಪ್ರಶ್ನಾತೀತ ಕಾಲದಲ್ಲಿ ತಾನೇ ಪ್ರವಾದಿ ವರ್ಯರು ಆಡಳಿತ ನಡೆಸಿದರು. ಅವರ ಸುತ್ತಲೂ ಇದ್ದಂತಹ ಕೈಸರ್, ಕಿಸ್ರಾ, ಹೆರ್ಕುಲಿಸ್‌ನಂತಹ ದೊಡ್ಡ ರಾಜರುಗಳು, ಚಿಕ್ಕ ರಾಜರುಗಳು ಆಡಳಿತ ನಡೆಸಿದರು. ಅವರ ಹಾಗೆ ಪ್ರವಾದಿ ವರ್ಯರು ಆಡಳಿತ ನಡೆಸಿದ್ದರೆ ಯಾರು ಕೊರಗಿರಲಾರರು!

ನಾಯಕತ್ವ ಪದವಿಯನ್ನು ಪಡೆದ ಒಬ್ಬರು

* ತರಹ ತರಹ ತಿಂದು, ಉಟ್ಟರೇ?

* ಹಲವು ತೆರನಾದ ವಸ್ತುಗಳನ್ನು ಬಳಸಿದರೇ?

* ಐಷಾರಾಮಿ ವಸ್ತುಗಳನ್ನು ಗುಡ್ಡೆ ಹಾಕಿದ್ದರೇ?

* ತಲೆಯೆತ್ತಿ ನೋಡುವಷ್ಟು ಭವನಗಳನ್ನು ಕಟ್ಟಿದ್ದರೇ?

* ಊರನ್ನೇ ಕೊಂಡು ಕೊಂಡಿದ್ದರೇ?

* ತನ್ನ ವಾರಸ್ಸುಗಳಿಗೆ ಕೂಡಿಟ್ಟು ಹೊಗಿದ್ದರೇ?

ಎಂಬ ಪ್ರಶ್ನೆಗಳಿಗೆ ಇಲ್ಲ ಎಂದು ಉತ್ತರ ಹೇಳ ಬಹುದಾದರೆ ಮಾತ್ರ "ಅವರು ಪದವಿಯನ್ನು ಬಳಸಿ ವಸ್ತು ಸಂಗ್ರಹಿಸಲಿಲ್ಲ" ಎಂದು ಹೇಳಬಹುದು. ಮೇಲ್ಕಂಡ ಎಲ್ಲಾ ಪ್ರಶ್ನೆಗಳಿಗೂ ಪ್ರವಾದಿ ವರ್ಯರ ಮಟ್ಟಿಗೆ "ಇಲ್ಲ" ಎಂದೇ ಇತಿಹಾಸ ಉತ್ತರ ಹೇಳಿದೆ.


Tuesday, April 10, 2018

ಕೊನೆಯ ಪ್ರವಾದಿ - 5.ಶಕ್ತಿಶಾಲಿ ಎರಡು ನಾಯಕತ್ವ

ಆಡಳಿತದ ನಾಯಕತ್ವ ಮಾತ್ರವಲ್ಲದೆ ಮತ್ತೊಂದು ನಾಯಕತ್ವವು ಅವರ ಬಳಿಯಿತ್ತು. ಅವರು ಪರಿಚಯಿಸಿದ ಇಸ್ಲಾಂ ಅನ್ನುವ ಆಧ್ಯಾತ್ಮಿಕ ಮಾರ್ಗಕ್ಕೆ ಅವರೇ ನಾಯಕರಾಗಿದ್ದರು. ಒಂದು ರೀತಿಯಲ್ಲಿ ನೋಡಿದರೆ ಇದು ಆಡಳಿತದ ನಾಯಕತ್ವಕ್ಕಿಂತ ಬಲಿಷ್ಟವಾದುದು ಎಂದು ಹೇಳಬಹುದು.

ಆಡಳಿತದ ನಾಯಕತ್ವಕ್ಕೆ ಕಟ್ಟುಪಡುವಾಗ ಭಯದ ಕಾರಣದಿಂದಲೇ ಜನರು ಕಟ್ಟುಪಡುವರು. ಮನಃ ಪೂರ್ವಕರಾಗಿ ಕಟ್ಟುಪಡಲಾರರು. ಧಾರ್ಮಿಕ ನಾಯಕನಿಗೆ ಭಕ್ತಿಯೊಂದಿಗೆ ಕಟ್ಟುಪಡುವರು.

ಆಧ್ಯಾತ್ಮಿಕ ನಾಯಕರಿಗೆ ಮುಂದೆ ಆಡಳಿತದ ನಾಯಕರು, ಜ್ಞಾನಿಗಳು ಕೂಡ ಮಂಡಿಯೂರಿ ಇರುವುದನ್ನು, ದೇಶವನ್ನೇ ಆಳುವ ನಾಯಕರುಗಳು ಕೂಡ ಆಧ್ಯಾತ್ಮಿಕ ನಾಯಕರುಗಳ ಪಾದಗಳಲ್ಲಿ ಬಿದ್ದು ನಮಸ್ಕರಿಸುವುದನ್ನು ಇಂದಿಗೂ ನಾವು ನೋಡುತ್ತಿದ್ದೇವೆ.

ಯಾರೋ ರೂಪಿಸಿದ ಒಂದು ಧರ್ಮದಲ್ಲಿರುವ ಸಾವಿರಗಟ್ಟಲೆ ಇರುವ ಆಧ್ಯಾತ್ಮಿಕ ಪುರುಷರಲ್ಲಿ ಒಬ್ಬರಾಗಿ ಇರುವವರಿಗೆ ಇಂತಹ ಸ್ಥಿತಿ ಎಂದರೆ ಒಂದು ಮಾರ್ಗವನ್ನೇ ರೂಪಿಸಿದ ಒಂದೇ ಆಧ್ಯಾತ್ಮಿಕ ನಾಯಕರಾಗಿದ್ದ ಪ್ರವಾದಿ ಮೊಹಮ್ಮದ್ (ಸಲ್) ರವರು ಜನರಿಂದ ನಡುವೆ ಎಷ್ಟು ಗೌರವಾನ್ವಿತರು ಎಂಬುದನ್ನು ಹೇಳ ಬೇಕಾಗಿಲ್ಲ.

ಇದರಿಂದ ಪ್ರವಾದಿವರ್ಯರ ನಡೆ,ಉಡುಗೆ, ಭಾವನೆಯನ್ನು ಕೂಡ ಹಾಗೆಯೇ ಹಿಂಬಾಲಿಸ ಬಲ್ಲ ಸ್ವಯಂ ಹಿಂಬಾಲಕರನ್ನು ಪ್ರವಾದಿ ಮೊಹಮ್ಮದ್ (ಸಲ್) ರವರು ಪಡೆದಿದ್ದರು.

ಪ್ರಶ್ನಾತೀತ ಆಧ್ಯಾತ್ಮಿಕ ನಾಯಕತ್ವವು, ಆಲುಗಾಡಿಸಲಾಗದ ಆಡಳಿತದ ನಾಯಕತ್ವವು ಅವರ ಬಳಿಯಿದ್ದರೂ ಅವರು ಹೇಗೆ ನಡೆದುಕೊಂಡರು?

ನಾಯಕತ್ವಕ್ಕೆ ಆಸೆಪಡುವವರು, ಇದರ ಹಾಗೆ ಪದವಿಗಳನ್ನು, ಅಧಿಕಾರವನ್ನು ಪಡೆದವರು ಹೇಗೆ ನಡೆದು ಕೊಳ್ಳುವರೋ, ಆ ರೀತಿ ಪ್ರವಾದಿ ಮೊಹಮ್ಮದ್ (ಸಲ್) ರವರು ನಡೆದು ಕೊಳ್ಳಲಿಲ್ಲ. ಪದವಿಯನ್ನು, ಅಧಿಕಾರವನ್ನು ಪಡೆದವರು ಅವನ್ನು ಹೇಗೆ ಬಳಸುವರೋ ಆ ರೀತಿ ಅವರು ಬಳಸಿ ಕೊಳ್ಳಲೂ ಇಲ್ಲ.


Monday, April 9, 2018

ಕೊನೆಯ ಪ್ರವಾದಿ - 4.ಮದೀನ ಜೀವನ

ಪ್ರವಾದಿ ಮೊಹಮ್ಮದ್ (ಸಲ್) ರವರು ಮಕ್ಕಾದಲ್ಲಿ ಇದ್ದಾಗ ಅವರ ನೀತಿ ತತ್ವ ಪ್ರಚಾರದ ಬಗ್ಗೆ ಕೇಳಿ ಅರಿತು ಮದೀನದಿಂದ ಕೆಲವರು ಬಂದು ಪ್ರವಾದಿ ಮೊಹಮ್ಮದ್ (ಸಲ್) ರವರನ್ನು ಮೊದಲೇ ಭೇಟಿಯಾಗಿದ್ದರು. ಪ್ರವಾದಿ ಮೊಹಮ್ಮದ್ (ಸಲ್) ರವರು ಹೇಳಿದ ನೀತಿ ತತ್ವ ವಿಶ್ಲೇಷಣೆಗಳನ್ನು ಒಪ್ಪಿ ಕೊಂಡಿದ್ದರು.

"ಮಕ್ಕಾದಲ್ಲಿ ಜೀವಿಸಲಾಗದ ಸ್ಥಿತಿ ಏರ್ಪಡುವುದಾದರೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ಮದೀನಗೆ ಬರಬಹುದು; ನಮ್ಮ ಪ್ರಾಣವನ್ನು ಕೊಟ್ಟಾದರೂ ನಿಮ್ಮನ್ನು ರಕ್ಷಿಸುವೆವು" ಎಂದು ಅವರು ಪ್ರಮಾಣ ವಚನವನ್ನು ನೀಡಿದ್ದರು. ಮದೀನಗೆ ತೆರಳಿ ಪ್ರವಾದಿ ಮೊಹಮ್ಮದ್ (ಸಲ್) ಭೋದಿಸಿದ ಒಂದೇ ಒಡೆಯ ಅಥವಾ ದೈವ ಎಂಬ ನೀತಿ ತತ್ವ ಪ್ರಚಾರವನ್ನು ಒಂದಷ್ಟು ಜನರ ಮನವನ್ನು ಗೆದ್ದಿದ್ದರು.

ಇದರ ಕಾರಣವಾಗಿಯೇ ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನ ನಗರಕ್ಕೆ ಪ್ರಯಾಣ ಬೆಳೆಸಿದರು.

ಅವರು ನಿರೀಕ್ಷಿಸಿದಂತೆಯೇ ಆ ಊರಲ್ಲಿ ಮಹತ್ತಾದ ಸ್ವಾಗತ ಅವರಿಗೆ ಕಾದಿತ್ತು. ಆ ಊರ ಜನರು ಪ್ರವಾದಿ ಮೊಹಮ್ಮದ್ (ಸಲ್) ಪ್ರಚಾರ ಮಾಡಿದ ನೀತಿ ತತ್ವವನ್ನು ಸ್ವೀಕರಿಸಿ ಕೊಂಡರು. ಪ್ರವಾದಿ ವರ್ಯರನ್ನು ತಮ್ಮ ನಾಯಕನನ್ನಾಗಿಯೂ ಒಪ್ಪಿ ಕೊಂಡರು.

ಮದೀನ ನಗರದ ಜನರು ಮಾತ್ರವಲ್ಲದೆ ಅದರ ಸುತ್ತಲಿರುವ ಜನರು ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಕುರಿತು ಅರಿತು ಪಂಗಡ ಪಂಗಡಗಳಾಗಿ ಇಸ್ಲಾಮನ್ನು ಸ್ವೀಕಾರ ಮಾಡಿಕೊಂಡರು.

ಪ್ರವಾದಿ ಮೊಹಮ್ಮದ್ (ಸಲ್) ತಮ್ಮ 63ನೆಯ ವಯಸ್ಸಿನಲ್ಲಿ ಮದೀನದಲ್ಲಿ ಮರಣ ಹೊಂದಿದಾಗ ಇಂದಿನ ಇಂಡಿಯಾಗಿಂತ ಹೆಚ್ಚಿನ ಭೂ ಪ್ರದೇಶವನ್ನು ತಮ್ಮ ಆಡಳಿತದಡಿಗೆ ತಂದಿದ್ದರು.

ಇಂಡಿಯಾನಂತಹ ಬಹು ದೊಡ್ಡ ಭೂ ಪ್ರದೇಶವನ್ನು ಒಂದು ದೇಶವನ್ನಾಗಿ ಆಗಿಸಲು ಎಂಟು ನೂರು ವರ್ಷಗಳ ಕಾಲ ಮುಸ್ಲಿಮರ ಆಡಳಿತ ಮತ್ತು ಇನ್ನೂರು ವರ್ಷಗಳ ಕಾಲ ಪರಂಗೀಯರ ಆಡಳಿತವು ಒಟ್ಟಿಗೆ ಸಾವಿರ ವರ್ಷಗಳೇ ಬೇಕಾದವು.

ಸಾವಿರ ವರ್ಷಗಳಲ್ಲಿ ರೂಪಿಸ ಬೇಕಾದ ಒಂದು ಅಖಂಡ ದೇಶವನ್ನು ಹತ್ತೇ ವರ್ಷಗಳಲ್ಲಿ ಪ್ರವಾದಿ ಮೊಹಮ್ಮದ್ (ಸಲ್) ರವರು ರೂಪಿಸಿದ್ದರು. ಅದೂ ಸಹ ಶೋಷಣೆಯಿಂದಲ್ಲದೆ ತಮ್ಮ ನೀತಿ ತತ್ವ ಪ್ರಚಾರದ ಮೂಲಕ ಜನ ಮನ ಗೆದ್ದು ಈ ದೇಶವನ್ನು ರೂಪಿಸಿದ್ದರು. ಇಂತಹ ಸಾಮ್ರಾಜ್ಯ ಪ್ರವಾದಿ ವರ್ಯರ ಮುಂಚೆಯೋ, ನಂತರವೋ ಲೋಕದಲ್ಲಿ ಎಲ್ಲೂ ರೂಪಿಸಲಾಗಲಿಲ್ಲ ಎನಬಹುದು.

ಪ್ರವಾದಿ ಮೊಹಮ್ಮದ್ (ಸಲ್) ರವರು ಮದೀನಗೆ ಬಂದ ಅವಧಿಯಲ್ಲಿ ಇಟಲಿ ಮತ್ತು ಪರ್ಷಿಯಾ ಲೋಕದಲ್ಲಿ ಬಲಿಷ್ಠ ದೇಶಗಲಾಗಿದ್ದವು. ಲೋಕದ ಬಹು ದೊಡ್ಡ ಮಹಾ ಶಕ್ತಿಯುತ ದೇಶಗಳಾಗಿದ್ದವು. ಆದರೆ ಪ್ರವಾದಿ ಮೊಹಮ್ಮದ್ (ಸಲ್) ರವರು ಹತ್ತೇ ವರ್ಷಗಳಲ್ಲಿ ತಮ್ಮ ದೇಶವನ್ನು ಲೋಕದ ಏಕೈಕ ಮಹಾ ಶಕ್ತಿಯಾಗಿ ಪರಿವರ್ತಿಸಿದ್ದರು.

ಅಂದಿನ ಕಾಲದಲ್ಲಿ ಲೋಕದ ಬಲಿಷ್ಠ ಸೈನ್ಯ ಬಲ ಗೊಂಡದ್ದು, ಕೂಲಿಗಾಗಿ ಕೆಲಸ ಮಾಡದ ವೀರರನ್ನು ಹೊಂದಿದ್ದು ಪ್ರವಾದಿ ವರ್ಯರ ಸೈನ್ಯವಾಗಿತ್ತು. ಅದೇ ತರಹ ಪ್ರಶ್ನಾತೀತ ರೀತಿಯಲ್ಲಿ ಅಧಿಕಾರ ಪಡೆದ ಮಹಾ ನಾಯಕರಾಗಿಯೂ ಪ್ರವಾದಿ ಮೊಹಮ್ಮದ್ (ಸಲ್) ಇದ್ದರು.

ಕೊನೆಯ ಪ್ರವಾದಿ - 3.ಮಕ್ಕಾ ಜೀವನ


ನಲವತ್ತು ವಯಸ್ಸಿನ ವರೆಗೂ ಸರಾಸರಿ ಮನುಷ್ಯರಲ್ಲಿ ಒಬ್ಬರಾಗಿದ್ದ ಪ್ರವಾದಿ ಮೊಹಮ್ಮದ್ (ಸಲ್) ರವರು ತಮ್ಮ ನಲವತ್ತನೆಯ ವಯಸ್ಸಿನಲ್ಲಿ ತಮ್ಮನ್ನು ಏಕೈಕ ಒಡೆಯನ ಪ್ರವಾದಿಯಾಗಿರುವೆ ಎಂದು ಪ್ರಕಟಣೆ ಮಾಡಿದರು.

"ಅಖಿಲ ಲೋಕವನ್ನು ಸೃಷ್ಟಿಸಿದವನು ಒಂದೇ ಒಡೆಯನೆ; ಆ ಒಂದು ಒಡೆಯನನ್ನು ಹೊರತು ಯಾರನ್ನು, ಯಾವುದನ್ನು ಆರಾಧಿಸ ಬಾರದು ಎಂಬುದೇ ಏಕೈಕ ಒಡೆಯನಿಂದ ತಮಗೆ ಬಂದಿರುವ ಮುಖ್ಯವಾದ ಸಂದೇಶ" ಎಂದರು.

"ಕೊಲೆ, ದರೋಡೆ, ಬಡ್ಡಿ, ಜೂಜಾಟ, ವ್ಯಭಿಚಾರ, ಮಾದಕ ವಸ್ತುಗಳು, ಸುಳ್ಳು, ಮೋಸಗಾರಿಕೆ, ಏಮಾರಿಸುವುದು ಮುಂತಾದ ಎಲ್ಲಾ ಕೆಡಕುಗಳಿಂದಲೂ ಮನುಷ್ಯರು ದೂರವಿರ ಬೇಕು" ಎಂಬ ಸಂದೇಶವು ಏಕೈಕ ಒಡೆಯನಿಂದ ತಮಗೆ ಬರುವುದಾಗಿ ಹೇಳಿದರು.

ಕಾಬಾ ಎನ್ನುವ ಆಲಯದಲ್ಲೂ, ಅದರ ಸುತ್ತಲೂ 360 ವಿಗ್ರಹಗಳನ್ನು ಸ್ಥಾಪಿಸಿ ದಿನಕ್ಕೊಂದು ವಿಗ್ರಹಕ್ಕೆ ಆರಾಧನೆ ನಡೆಸಿದ ಸಮುದಾಯದಲ್ಲಿ "ಒಂದೇ ಒಂದು ಒಡೆಯನನ್ನು ಮಾತ್ರವೇ ಆರಾಧಿಸ ಬೇಕು; ಉಳಿದವು ದೈವಗಳಲ್ಲ" ಎಂದು ಹೇಳಿದರೆ ಯಾವ ಪರಿಣಾಮಗಳು ಏರ್ಪಡುವುದು ಎಂಬುದನ್ನು ಚರಿತ್ರೆಯನ್ನು ಓದದವರು ಕೂಡ ಊಹಿಸ ಬಹುದು.

ಸತ್ಯವಂತ, ನಂಬಿಕೆಗೆ ಪಾತ್ರರು ಎಂದೆಲ್ಲಾ ಪ್ರವಾದಿ ಮೊಹಮ್ಮದ್ (ಸಲ್) ರವರನ್ನು ಹೊಗಳಿದ ಜನರು ಈ ತತ್ವ ಸಿಧ್ಧಾಂತ ಪ್ರಕಟಣೆಯ ನಂತರ ಕಟು ವೈರಿಗಳಾಗಿ ಬಿಟ್ಟರು. ಹುಚ್ಚ ಎಂಬ ಪಟ್ಟ ನೀಡಿದರು. ಅವರನ್ನು, ಅವರ ತತ್ವ ಸಿಧ್ಧಾಂತವನ್ನು ಸ್ವೀಕರಿಸಿದ ಬೆರಳೆಣಿಕೆಯ ಕೆಲವರನ್ನು ಹೇಳಲಾಗದಷ್ಟು ಕಷ್ಟಗಳಿಗೊಳಪಡಿಸಿದರು.

ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಮೊಟ್ಟ ಮೊದಲಿಗೆ  ವಿರೋಧಿಸಿದವರು, ಕಟುವಾಗಿ ವಿರೋಧಿಸಿದವರು ಅವರ ಕುಟುಂಬದವರೇ ಆಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

"ತಮ್ಮ ಕುಲವನ್ನು ಸೇರಿದ ಒಬ್ಬರೇ "ಎಲ್ಲರೂ ಸಮ" ಎಂದು ಪ್ರಚಾರ ಮಾಡುತ್ತಿದ್ದಾರೆ! ಕೀಳು ಜಾತಿಯವರನ್ನು, ದುರ್ಬಲರನ್ನು, ಕರಿಯರನ್ನು, ಗುಲಾಮರನ್ನು ಮೇಲು ಜಾತಿಗೆ ಸಮ ಎನ್ನುತ್ತಿದ್ದಾರೆ! ತಮಗೆ ಸರಿ ಸಮಾನರಾಗಿ ಅವರನ್ನು ಗೌರವಿಸಿ ಕುಲಹಿರಿಮೆಯನ್ನು ಕೆಡಿಸುತ್ತಿದ್ದಾರೆ" ಎಂಬ ಕಡುಗೋಪದಿಂದ ತಮ್ಮನ್ನು ಬಹಳ ಮೇಲು ಕುಲ ಎಂದು ನಂಬಿದ್ದ ಪ್ರವಾದಿ ವರ್ಯರ ಕುಲದವರು ಕಟುವಾಗಿ ಪ್ರವಾದಿ ವರ್ಯರನ್ನು ವಿರೋಧಿಸಿದರು.

ಪ್ರವಾದಿ ಮೊಹಮ್ಮದ್ (ಸಲ್) ರವರು ತಮ್ಮ ಪ್ರಚಾರವನ್ನು ರಹಸ್ಯವಾಗಿ ನಡೆಸುವ ಸ್ಥಿತಿಗೆ ನೂಕಲ್ಪಟ್ಟರು.

ಪ್ರವಾದಿ ಮೊಹಮ್ಮದ್ (ಸಲ್) ರವರ ನೀತಿ ತತ್ವದೆಡೆ ಆಕರ್ಷಿಸಲ್ಪಟ್ಟ ಅಮಾಯಕರನ್ನು, ಕೇಳಲು ಗತಿಯಿಲ್ಲದ ನಿರ್ಗತಿಕರನ್ನು ಕೊಂದು ಗುಡ್ಡೆ ಹಾಕಿದರು. ಬಾಲಕರನ್ನು ಛೂ ಬಿಟ್ಟು ಕಲ್ಲಿನಿಂದ ಹೊಡೆಯುವಂತೆ ಮಾಡಿದರು.

ಒಂದು ಹಂತದಲ್ಲಿ ಊರಿಂದಾಚೆಗಿನ ಕಣಿವೆಗೆ ಪ್ರವಾದಿ ವರ್ಯರನ್ನು, ಅವರ ಮಿತ್ರರನ್ನು ಹೊಡೆದಟ್ಟಿ ಸಾಮೂಹಿಕ ಬಹಿಷ್ಕಾರವನ್ನು ಮಾಡಿದರು. ಹಲವು ದಿನಗಳು ಎಲೆಗಳನ್ನು, ಒಣಗಿದ ತರಗೆಲೆಗಳನ್ನು ಮಾತ್ರವೇ ಆಹಾರವನ್ನಾಗಿ ಸೇವಿಸುವ ಸ್ಥಿತಿಗೆ ಅವರು ತಳ್ಳಲ್ಪಟ್ಟರು.

"ಪ್ರವಾದಿ ವರ್ಯರೊಡನೆ ಯಾರು ಮಾತನಾಡ ಬಾರದು; ಅವರೊಂದಿಗೆ ಯಾರು ಯಾವ ಸಂಬಂಧವೂ ಇಟ್ಟು ಕೊಳ್ಳ ಬಾರದು" ಎಂದೆಲ್ಲಾ ಊರಲ್ಲಿ ನಿಯಂತ್ರಿಸಿದ್ದರು.

ಪ್ರವಾದಿ ವರ್ಯರ ಮಿತ್ರರು ಒಂದು ಹಂತದಲ್ಲಿ ಊರನ್ನು ಬಿಟ್ಟೆ ಓಡಿ ಹೋಗುವ ಸ್ಥಿತಿಗೆ ತುತ್ತಾದರು.ಪ್ರವಾದಿ ವರ್ಯರ ಅನುಮತಿಯೊಂದಿಗೆ ಕೆಲವರು ಅಬಿಸೀನಿಯಾಕ್ಕೂ, ಇನ್ನು ಕೆಲವರು ಮದೀನ ಎನ್ನುವ ನಗರಕ್ಕೂ ವಲಸೆ ಹೋದರು.

ಇಷ್ಟೊಂದು ದಬ್ಬಾಳಿಕೆಗಳನ್ನೂ ಮೀರಿ ಪ್ರವಾದಿ ವರ್ಯರ ತತ್ವ ಬೆಳೆಯುತ್ತಲೇ ಇತ್ತು.

ಕೊನೆಗೆ "ಇವರನ್ನು ಪ್ರಾಣ ಸಮೇತ ಬಿಟ್ಟರೆ ಊರನ್ನೇ ಕೆಡಿಸಿ ಬಿಡುವರು; ಆದ್ದರಿಂದ ಕೊಲೆ ಮಾಡಿ ಬಿಡುವೆವು" ಎಂದು ಯೋಜಿಸಿದರು.

ಈ ಸುದ್ದಿಯನ್ನು ಅರಿತ ಪ್ರವಾದಿ ಮೊಹಮ್ಮದ್ (ಸಲ್) ರವರು ತಮ್ಮ ಸ್ವತ್ತು, ಸುಖ, ಮನೆಮಠ ಎಲ್ಲವನ್ನೂ ಹಾಗೆಯೇ ಬಿಟ್ಟು ಸುಲಭವಾಗಿ ತೆಗೆದು ಕೊಂಡು ಹೋಗ ಬಹುದಾದ ಚಿನ್ನದ ನಾಣ್ಯಗಳನ್ನು ಮಾತ್ರವೇ ತೆಗೆದು ಕೊಂಡು ತಮ್ಮ ಮಿತ್ರ ಅಬು ಬಕ್ಕರೊಂದಿಗೆ ಮದೀನ ಎನ್ನುವ ನಗರವನ್ನು ದಿಟ್ಟಿಸಿ ತ್ಯಾಗ ಪ್ರಯಾಣ ಕೈಗೊಂಡರು.

ನಲವತ್ತನೆಯ ವಯಸ್ಸಿನಲ್ಲಿ ಆರಂಭಿಸಿದ ಮಕ್ಕಾ ಜೀವನ ಪ್ರವಾದಿ ಮೊಹಮ್ಮದ್ (ಸಲ್) ರವರ 53 ನೆಯ ವಯಸ್ಸಿನ ವರೆಗೂ ನಡೆದಿತ್ತು.

ಕೊನೆಯ ಪ್ರವಾದಿ - 2.ಸಂಕ್ಷಿಪ್ತ ಇತಿಹಾಸ


ಇಂದಿನ ಸೌದಿ ಅರೇಬಿಯಾದಲ್ಲಿರುವ ಮಕ್ಕಾ ಎನ್ನುವ ನಗರದಲ್ಲಿ ಕ್ರಿ.ಶ 571 ನೆಯ ವರ್ಷ ಪ್ರವಾದಿ ಮೊಹಮ್ಮದ್ (ಸಲ್) ರವರು ಜನಿಸಿದರು.

ಕುಲ ಮಹಿಮೆಯನ್ನು, ಜಾತಿ ಬೇಧವನ್ನು ಬೇರಿನ ಸಮೇತ ಕಿತ್ತೆಸೆದ ಪ್ರವಾದಿ ಮೊಹಮ್ಮದ್ (ಸಲ್) ರವರು ಅಂದು ಅರಬ್ ಭೂಮಿಯ ಶ್ರೇಷ್ಠ ಕುಲವೆಂದು ಪರಿಗಣಿಸಲ್ಪಟ್ಟಿದ್ದ "ಖುರೈಶ್" ಎನ್ನುವ ಕುಲದಲ್ಲಿ ಜನಿಸಿದ್ದರು.

ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಬ್ದುಲ್ಲಾಹ್ ರನ್ನು ತಮ್ಮ ಆರನೆಯ ವಯಸ್ಸಿನಲ್ಲಿ ತಾಯಿ ಆಮಿನಾರನ್ನು ಕಳೆದು ಕೊಂದು ಅನಾಥರಾಗಿದ್ದರು.

ನಂತರ ಹಿರಿ ತಾತ ಅಬ್ದುಲ್ ಮುತ್ತಲಿಬರ ಆಶ್ರಯದಲ್ಲೂ ಅವರ ಮರಣಾ ನಂತರ ಹಿರಿಯ ತಂದೆ ಅಬೂತಾಲಿಬರ ಆಶ್ರಯದಲ್ಲೂ ಬೆಳೆದರು.

ಚಿಕ್ಕ ವಯಸ್ಸಿನಲ್ಲಿ ಯಾರಿಗೂ ಭಾರವಾಗಿರ ಬಾರದು ಎಂಬುದರಿಂದ ಅತಿಕಡಿಮೆ ಕೂಲಿಗಾಗಿ ಕುರಿ ಮೇಯಿಸಿದರು. ಒಂದಷ್ಟು ವಿವರ ತಿಳಿದ ನಂತರ ತಮ್ಮ ಹಿರಿಯ ತಂದೆಯೊಂದಿಗೆ ಸೇರಿ ಸಿರಿಯಾ ದೇಶಕ್ಕೆ ಹೋಗಿ ವ್ಯಾಪಾರ ಮಾಡಿದರು. ಇದರಿಂದ ಬಾಲ್ಯದಲ್ಲಿ ಶಿಕ್ಷಣ ಕಲಿಯುವ ಅವಕಾಶ ಅವರಿಗೆ ದೊರಕಲಿಲ್ಲ. ಬರೆಯಲೋ ಓದಲೋ ಅವರಿಗೆ ಬರುವುದಿಲ್ಲ.

ತಮ್ಮ 25 ನೆಯ ವಯಸ್ಸಿನಲ್ಲಿ ವ್ಯಾಪಾರವನ್ನು ಕಲಿತು ಕರಗತ ಮಾಡಿಕೊಂಡರು. ಮಕ್ಕಾದಲ್ಲಿ ಬಹು ದೊಡ್ಡ ಶ್ರೀಮಂತೆಯಾಗಿಯೂ, ದೊಡ್ಡ ವಾಣಿಜ್ಯ ಮಾಡುವವರಾಗಿಯೂ ಇದ್ದ ಖತೀಜಾ ಅಮ್ಮಾವರು ಪ್ರವಾದಿ ವರ್ಯರ ನೈತಿಕತೆ, ಸಂಸ್ಕೃತಿ, ಸಮಗ್ರತೆ ಮತ್ತು ವ್ಯಾಪಾರ ಪ್ರತಿಭೆ ಮುಂತಾದವನ್ನು ಕೇಳಿ ತಿಳಿದು ಪ್ರವಾದಿ ವರ್ಯರನ್ನು ಮದುವೆಯಾಗಲು ಬಯಸಿದರು. ಪ್ರವಾದಿ ವರ್ಯರಿಗಿಂತ ಹೆಚ್ಚು ವಯಸ್ಸಿನವರಾಗಿಯೂ ವಿಧವೆಯಾಗಿಯೂ ಇದ್ದ ಖತೀಜಾ ಅಮ್ಮವರನ್ನು ಪ್ರವಾದಿ ಮೊಹಮ್ಮದ್ (ಸಲ್) ರವರು ಮದುವೆ ಮಾಡಿ ಕೊಂಡರು.

ಇದರ ಮೂಲಕ ಮಕ್ಕಾದಲ್ಲಿ ಬಹು ದೊಡ್ಡ ಶ್ರೀಮಂತ ಎಂಬ ಸ್ಥಾನಕ್ಕೇರಿದರು.

ತಮ್ಮ ನಲವತ್ತು ವರ್ಷ ವಯಸ್ಸಿನ ವರೆಗೆ ಅವರು ಸಾಧಾರಣ ಮನುಷ್ಯರಾಗಿಯೂ, ಒಂದು ವ್ಯಾಪಾರಿಯಾಗಿಯಷ್ಟೇ ಇದ್ದರು. ನಲವತ್ತು ವಯಸ್ಸಿನ ವರೆಗೂ ಯಾವ ಒಂದು ಚಳುವಳಿಯನ್ನು ಅವರು ರೂಪಿಸಿರಲಿಲ್ಲ. ಯಾವ ಒಂದು ತತ್ವ ಸಿಧ್ಧಾಂತದ ಪ್ರಚಾರವನ್ನು ಮಾಡಿರಲಿಲ್ಲ.

ನಲವತ್ತು ವಯಸ್ಸು ವರೆಗಾದ ಪ್ರವಾದಿ ವರ್ಯರ ಸಂಕ್ಷಿಪ್ತ ಇತಿಹಾಸ ಇದುವೇ.

ನಲವತ್ತು ವಯಸ್ಸಿನ ನಂತರದ ಪ್ರವಾದಿ ವರ್ಯರ ಜೀವನ ಎರಡು ದೊಡ್ಡ ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿದೆ. ಒಂದು ಮಕ್ಕಾದ ಜೀವನ, ಮತ್ತೊಂದು ಮದೀನಾದ ಜೀವನ. ಇದರ ಕುರಿತು ಒಂದಷ್ಟು ತಿಳಿದು ಕೊಳ್ಳೋಣ.

ಕೊನೆಯ ಪ್ರವಾದಿ – 1.ಮುನ್ನುಡಿ


ಅಲ್ಲಾಹನ ಹೆಸರಿನಿಂದ
               ಚಿಂತಕರು, ಸುಧಾರಕರು, ಆಡಳಿತದ ನಾಯಕರು, ಉಪಯುಕ್ತ ಹಲವು ಅವತರಣಿಕೆಗಳನ್ನು ಲೋಕಕ್ಕೆ ನೀಡಿದವರು, ಮಹಾನ್ ಕ್ರಾಂತಿಯನ್ನು ಏರ್ಪಡಿಸಿದವರು, ಮಹಾನ್ ವೀರರು, ಉದಾರ ಮನಸ್ಸಿನ ದಾನಿಗಳು, ಪಂಡಿತರು ಮತ್ತು ಧರ್ಮ ಸಂಸ್ಥಾಪಕರು ಎಂದು ಸಾವಿರಗಟ್ಟಲೆ ಸಾಧಕರು ಭೂಮಿಯಲ್ಲಿ ಜನಿಸಿ ಮರಣ ಹೊಂದಿರುವರು.

ಇಂತಹ  ಸಾಧಕರರಿಂದ ಮುಖ್ಯವಾದ ಜಾಗವನ್ನು ಪಡೆದ ನೂರು ಸಾಧಕರನ್ನು ಆಯ್ಕೆ ಮಾಡಿ "ದಿ ಹಂಡ್ರೆಡ್" (The Hundred) ಎಂಬ ಪುಸ್ತಕವನ್ನು ಮೈಕ್ಹೆಲ್ ಹಾರ್ಟ್ (Michel Heart) ಎಂಬ ಇತಿಹಾಸದ ಸಂಶೋಧನಾಕಾರ ಬರೆದ. 

ಮಾನವ ಕುಲದಲ್ಲಿ ಬಹುದೊಡ್ಡ ಪ್ರಭಾವ ಬೀರಿದವರನ್ನು ಅವರು ಕ್ರಮ ಪಡಿಸುವಾಗ ಪ್ರವಾದಿ ಮೊಹಮ್ಮದ್ (ಸಲ್) ಅವರಿಗೆ ಮೊದಲ ಸ್ಥಾನ ನೀಡಿದರು. ಮೊದಲ ಸಾಧಕರಾಗಿ ಪ್ರವಾದಿ ಮೊಹಮ್ಮದ್ (ಸಲ್) ಅವರನ್ನು ಈ ಪುಸ್ತಕದಲ್ಲಿ ಅವರು ಸೂಚಿಸಿರುವರು.

ಮೈಕ್ಹೆಲ್ ಹಾರ್ಟ್ ಕ್ರೈಸ್ತ ಧರ್ಮದಲ್ಲಿ ಗಾಢ ವಿಶ್ವಾಸಿಯಾಗಿದ್ದರೂ ಸಹ "ಜನರಲ್ಲಿ ಬಹುದೊಡ್ಡ ಪ್ರಭಾವ ಬೀರಿದವರು ಎಂದರೆ ಮೊದಲ ಸ್ಥಾನ ಪ್ರವಾದಿ ವರ್ಯರಿಗೆ ಮಾತ್ರ" ಎಂದು ನುಡಿದಿರುವರು.

ಇತಿಹಾಸದ ನಾಯಕರ ಬಗ್ಗೆ ತಟಸ್ಥ ಮನೋಸ್ಥಿತಿಯಲ್ಲಿ, ಏರುಪೇರಿಲ್ಲದೆ ಯಾರೇ ಸಂಶೋಧನೆ ಮಾಡಿದರೂ, ಯಾವ ಕೋನದಲ್ಲಿ ಸಂಶೋಧನೆ ಮಾಡಿದರೂ ಅವರಿಂದ ಪ್ರವಾದಿ ವರ್ಯರಿಗೆ ಮಾತ್ರವೇ ಮೊದಲ ಸ್ಥಾನವನ್ನು ನೀಡ ಬಹುದು.

ಹದಿನಾಲ್ಕು ಶತಮಾನಗಳ ಮುಂಚೆ ಬಾಳಿ ಮರಣಿಸಿದ ಒಂದು ಮನುಷ್ಯ ಅಂದು ನುಡಿದ, ಕಾರ್ಯರೂಪಕ್ಕೆ ತಂದ ಎಲ್ಲವನ್ನೂ ಹಾಗೆಯೇ ಹಿಂಬಾಲಿಸುವ ಒಂದು ಸಮುದಾಯ ಲೋಕದಲ್ಲಿದೆ ಎಂದರೆ ಅದು ಪ್ರವಾದಿ ಮೊಹಮ್ಮದ್ (ಸಲ್) ರವರ ಸಮುದಾಯ ಮಾತ್ರವೇ.

ಪ್ರಾರ್ಥನಾ ಕ್ರಮಗಳು ಮಾತ್ರವಲ್ಲದೆ ವ್ಯಾಪಾರ ವ್ಯವಹಾರ, ಕುಟುಂಬಿಕ ಜೀವನ, ವೈಯುಕ್ತಿಕ ಜೀವನ ಎಂದು ಯಾವ ಸಮಸ್ಯೆಯಾಗಿದ್ದರೂ ಪ್ರವಾದಿ ಮೊಹಮ್ಮದ್ (ಸಲ್) ಅವರು ಆದೇಶಿಸಿದ ಹಾಗೆ ನಡೆಯ ಬಲ್ಲ ಸಮುದಾಯ ಹದಿನಾಲ್ಕು ಶತಮಾನಗಳಿಂದ ಲೋಕದಲ್ಲಿ ಇದ್ದು ಬಂದಿದೆ.

"ಎಲ್ಲಾ ಸಮಸ್ಯೆಗಳಿಗೂ ಪ್ರವಾದಿ ಮೊಹಮ್ಮದ್ (ಸಲ್) ರವರೆ ಮಾರ್ಗ ದರ್ಶಿ" ಎಂದು ಲೋಕದ ಕಾಲು ಭಾಗಕ್ಕೂ ಹೆಚ್ಹಿನ ಜನರು ನಂಬಿರುವರು. ಇಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಹುತ್ತಲೇ ಸಾಗುವ ದೃಶ್ಯವನ್ನು ಲೋಕ ಕಾಣುತ್ತಿದೆ.

ಲೋಕದಲ್ಲಿ ಯಾವ ನಾಯಕನಿಗೂ ಇಂತಹ ವಿಶಿಷ್ಟ ಅರ್ಹತೆ ಸಿಕ್ಕಿಲ್ಲ ಎಂಬುದನ್ನು ಯಾರಾಗಿದ್ದರೂ ಒಪ್ಪಿ ಕೊಳ್ಳಲೇ ಬೇಕು.

ಹೆಂಡತಿ,ಮಕ್ಕಳು,ಹೆತ್ತವರು,ನೆಂಟರಿಷ್ಟರು ಮತ್ತು ಎಲ್ಲರಿಗಿಂತ, ಏಕೆ ತಮ್ಮ ಪ್ರಾಣಕ್ಕಿಂತ ಪ್ರವಾದಿ ಮೊಹಮ್ಮದ್ (ಸಲ್) ರವರನ್ನು ಹೆಚ್ಚಾಗಿ ಪ್ರೀತಿಸುವ ಹಲವು ಕೋಟಿ ಜನರು ಇನ್ನು ಬಾಳುತ್ತಿದ್ದಾರೆ.

ಲೋಕದ ಜನರಿಂದ ಬಾರ್ಬರಿಕರು ಬಾಳುವ ಭೂಮಿಯೆಂದು ಅಲ್ಲಗಳೆಯಲ್ಪಟ್ಟ ಮರುಭೂಮಿಯಲ್ಲಿ ಹುಟ್ಟಿದ ಒಬ್ಬರಿಂದ ಇಷ್ಟೊಂದು ಉನ್ನತ ಸ್ಥಿತಿಯನ್ನು ಪಡೆಯಲಾಗಿದ್ದು ಹೇಗೆ?

ಈ ಪ್ರಶ್ನೆಗಾದ ಉತ್ತರವೇ ಈ ಪುಸ್ತಕ.

ಪ್ರವಾದಿ ಮೊಹಮ್ಮದ್ (ಸಲ್) ರವರ ಜನನದಿಂದ ಮರಣದ ವರೆಗಾದ ಜೀವನ ಚರಿತ್ರೆಯ ಪುಸ್ತಕವಾಗಿ ಇದು ಇರ ಬಹುದೋ ಎಂದು ಯಾರು ಗ್ರಹಿಸ ಬೇಡಿ.

* ಇದು ಚರಿತ್ರೆ ಪುಸ್ತಕವಲ್ಲ.
* ಪ್ರವಾದಿ ಮೊಹಮ್ಮದ್ (ಸಲ್) ರವರು ತೋರಿಸಿದ ಆಧ್ಯಾತ್ಮಿಕ ಮಾರ್ಗವನ್ನು ವಿಶ್ಲೇಷಿಸುವ ಪುಸ್ತಕವು ಅಲ್ಲ.
* ಇಸ್ಲಾಂ ಮಾರ್ಗದ ಸಿಧ್ಧಾಂತದ ರೂಪುರೇಷೆಗಳನ್ನೋ, ಅದರ ಕಾನೂನು ಕ್ರಮಗಳನ್ನೋ ವಿಶ್ಲೇಷಿಸುವುದಕ್ಕಾಗಿಯೂ ಈ ಪುಸ್ತಕ ಬರೆಯಲ್ಪಡಲಿಲ್ಲ.
* ಪ್ರವಾದಿ ಮೊಹಮ್ಮದ್ (ಸಲ್) ರವರು ನಡೆಸಿ ತೋರಿಸಿದ ಪವಾಡಗಳನ್ನು ಪಟ್ಟಿ ಮಾಡಿ ಚಕಿತ ಗೊಳಿಸುವುದು ಇದರ ಉದ್ದೇಶವಲ್ಲ.

ಬದಲಿಗೆ 1400 ವರ್ಷಗಳ ಮುಂಚೆ ಲೋಕದಲ್ಲಿ ಹುಟ್ಟಿದ ಪ್ರವಾದಿ ಮೊಹಮ್ಮದ್ (ಸಲ್) ರವರು ಇತರೆ ನಾಯಕರಿಂದ ಹೇಗೆ ಪ್ರತ್ಯೇಕತೆ ಹೊಂದಿದ್ದರು?

"ಪ್ರವಾದಿ ಮೊಹಮ್ಮದ್ (ಸಲ್) ತರಹ ಒಂದು ಮನುಷ್ಯರನ್ನು ಲೋಕ ಕಂಡಿದ್ದಿಲ್ಲ" ಎಂದು ಮುಸ್ಲಿಮೇತರ ನಾಯಕರುಗಳು, ಚಿಂತಕರು, ಇತಿಹಾಸಶಿಕ್ಷಕರು ಹಾಡಿ ಹೊಗಳುವುದು ಏಕೆ?

ನೂರು ಕೋಟಿಗೂ ಹೆಚ್ಚಿನ ಜನರು ಅವರನ್ನು ಇಂದಿಗೂ ಹಾಗೆಯೇ ಹಿಂಬಾಲಿಸುವುದು ಏಕೆ? ಮುಂತಾದ ಪ್ರಶ್ನೆಗಳಿಗಾದ ಉತ್ತರವೇ ಈ ಪುಸ್ತಕ.

ಮುಸ್ಲಿಮೇತರ ಮಿತ್ರರು ಪ್ರವಾದಿ ವರ್ಯರ ಬಗ್ಗೆ ಅರಿತು ಕೊಳ್ಳಲು ಬಯಸಿದರೆ ಅವರ ವಿಶಿಷ್ಟತೆಯನ್ನು, ಅರ್ಹತೆಗಳನ್ನು ನಿಶ್ಚಯವಾಗಿ ತಿಳಿದು ಕೊಳ್ಳಲು ಈ ಪುಸ್ತಕ ಸಹಾಯಕಾರಿ.

ಮುಸ್ಲಿಮರಿಗೂ ಕೂಡ ಪ್ರವಾದಿ ಮೊಹಮ್ಮದ್ (ಸಲ್) ಕುರಿತು ಅರಿತು ಕೊಳ್ಳ ಬೇಕಾದ ಸುದ್ದಿಗಳು ಇದರಲ್ಲಿವೆ.